ನರಸಿಂಹಚಾರ್, ಆರ್
	1860-1936. ಹೊಸಗನ್ನಡದ ವಿದ್ವತ್ ಪ್ರಪಂಚಕ್ಕೆ ಪೀಠಿಕೆ ಬರೆದ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮುಂತಾದ ಬಹುಭಾಷೆಗಳನ್ನು ತಿಳಿದಿದ್ದ ಈ ಪಂಡಿತರು ಶಾಸನ ಸಾಹಿತ್ಯವನ್ನೂ ಭಾಷಾವಿಷಯವನ್ನೂ ಸಾವಿರ ವರ್ಷಕ್ಕೂ ಮೇಲ್ಪಟ್ಟ ಕನ್ನಡ ಕವಿಗಳ ಮತ್ತು ಸಾಹಿತ್ಯದ ಇತಿಹಾಸ ವಿಷಯವನ್ನೂ ಕುರಿತಂತೆ ಸಮರ್ಥಕೃತಿಗಳನ್ನು ರಚಿಸಿದ್ದಾರೆ.

	ಹುಟ್ಟಿದ್ದು ಮಂಡ್ಯದ ಕೊಪ್ಪಲು ಎಂಬ ಊರಿನಲ್ಲಿ. ತಂದೆ ನಾರಾಯಣಾರ್ಯರಿಂದಲೇ ಸಂಸ್ಕøತ ವಿದ್ಯಾಭ್ಯಾಸ ಪಡೆದರು. ಮುಂದೆ ಕಾಲೇಜು ಸೇರಿ ಮೊತ್ತ ಮೊದಲ ಬಾರಿಗೇ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಅನಂತರ ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಹೈಸ್ಕೂಲುಗಳಲ್ಲಿ ಕೆಲವು ಕಾಲ ಉಪಾಧ್ಯಾಯರಾಗಿ ಕೆಲಸ ಮಾಡಿದರು.

	ಮೈಸೂರು ಪ್ರಾಕ್ತನ ಶಾಖೆಯಲ್ಲಿ ಲೂಯಿ ರೈಸ್ ಅವರು ನಿರ್ದೇಶಕರಾಗಿದ್ದಾಗ ನರಸಿಂಹಾಚಾರ್ಯರು ಅವರಿಗೆ ಸಹಾಯಕರಾಗಿ ಸೇರಿ (1899) ಅವರಿಂದ ಸಾಹಿತ್ಯ ಮತ್ತು ಸಂಶೋಧನೆಯ ಬಗ್ಗೆ ಮಾರ್ಗದರ್ಶನ ಪಡೆದರು. ರೈಸರು ವೃತ್ತಿಯಿಂದ ವಿಶ್ರಾಂತರಾದ ಮೇಲೆ ಇವರೇ ಆ ಸಂಸ್ಥೆಯ ನಿರ್ದೇಶಕರಾಗಿ 1922 ರವರೆಗೆ ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದಲ್ಲದೆ ಸಾಹಿತ್ಯದ ಕೆಲಸವನ್ನೂ ಮಾಡಿದರು.

	ನರಸಿಂಹಾಚಾರ್ಯರು ಎಷ್ಟು ದೊಡ್ಡ ವಿದ್ವಾಂಸರಾಗಿದ್ದರೂ ಅಷ್ಟೇ ಸರಳ ಸ್ವಭಾವದವರೂ ಆಗಿದ್ದರು. ಸರಸ, ಸಜ್ಜನಿಕೆ, ಸದಾಚಾರ, ಉದಾರತೆ ಇವರಿಗೆ ಸ್ವಭಾವತಃ ಬಂದ ಗುಣಗಳಾಗಿದ್ದವು. ಸಂಗೀತದ ಮೇಲೂ ಇವರಿಗೆ ತುಂಬ ಆಸಕ್ತಿಯಿತ್ತು. ಜೊತೆಯಲ್ಲಿಯೇ ಇವರು ದೈವಭಕ್ತರೂ ಆಗಿದ್ದರು. ಮೇಲುಕೋಟೆಯಲ್ಲಿ ವೇದಾಂತ ಪ್ರವರ್ತನ ಸಭೆಯನ್ನು ಸ್ಥಾಪಿಸಿದವರಲ್ಲಿ ಇವರೂ ಒಬ್ಬರು. ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಕೂಡ ಇವರೊಬ್ಬರಾಗಿದ್ದರು.

	ನರಸಿಂಹಾಚಾರ್ಯರ ಕೃತಿಗಳಲ್ಲಿ ನಾವು ಪ್ರಥಮವಾಗಿ ಮಾತ್ರವಲ್ಲದೆ ಪ್ರಮುಖವಾಗಿಯೂ ಗಮನಿಸಬೇಕಾದುದು ಅವರ ಕರ್ನಾಟಕ ಕವಿಚರಿತೆ; ಮೂರು ಸಂಪುಟಗಳಲ್ಲಿ, ಸಾವಿರದ ಆರುನೂರು ಪುಟಗಳಲ್ಲಿ, ಸಾವಿರದ ನೂರ ನಲವತ್ತೆಂಟು ಕವಿಗಳನ್ನೊಳಗೊಂಡಿರುವ ಈ ಮಹಾಕೃತಿಗಾಗಿ ಇವರು ಮೂವತ್ತೈದು ವರ್ಷಗಳು ಅವಿರತವಾಗಿ ಶ್ರಮಿಸಿದ್ದಾರೆ. ಅದ್ಭುತ ಸಾಧನೆಯಾಗಿರುವ ಈ ಸಂಶೋಧನ ಕೃತಿ ಒಂದೂವರೆ ಸಾವಿರ ವರ್ಷದ ಕನ್ನಡ ಸಾಹಿತ್ಯದ ಸ್ಥೂಲ ಪರಿಚಯವನ್ನೂ ಕವಿಗಳ ಕಾಲಜೀವನವನ್ನೂ ತಿಳಿಸುವ ಮೊತ್ತಮೊದಲ ಗ್ರಂಥವಾಗಿದೆ. ಕನ್ನಡ ಸಾಹಿತ್ಯದ ಬೃಹತ್ತನ್ನೂ ಮಹತ್ತನ್ನೂ ಮೊತ್ತಮೊದಲ ಬಾರಿಗೆ ಹಠಾತ್ತನೆ ದೃಗ್ಗೋಚರಗೊಳಿಸಿದ ಈ ಕೃತಿ ಆ ಸಮಯದಲ್ಲಿ ಒಂದು ಪವಾಡವೆನಿಸಿದರಲ್ಲಿ ಆಶ್ಚರ್ಯವಿಲ್ಲ. ಈ ಕೃತಿಯ ತರುವಾಯ ರಚಿತವಾದ ರಚಿತವಾಗುವ ಯಾವುದೇ ಸಾಹಿತ್ಯ ಚರಿತ್ರೆಯ ಕೃತಿಗೂ ಇದೇ ಮೂಲ ಆಕರ ಮತ್ತು ಆಧಾರ. ಈ ಬಗ್ಗೆ ಸಂಶೋಧನೆಯ ಗರ್ಭಗುಹೆಯನ್ನು ಪ್ರವೇಶಿಸುವ ಸಂಶೋಧಕನಿಗೆ ಇದೇ ದೀಪಸ್ತಂಭ. ನರಸಿಂಹಾಚಾರ್ಯರನ್ನು ಕನ್ನಡ ಸಾಹಿತ್ಯೇತಿಹಾಸದ ಕೊಲಂಬಸ್ ಎಂದು ಕರೆದಿರುವುದು ಈ ದೃಷ್ಟಿಯಿಂದ ಔಚಿತ್ಯಪೂರ್ಣವಾಗಿದೆ.

	ಇವರ ನೀತಿಮಂಜರಿ ಎಂಬ ಗ್ರಂಥದ ಪ್ರಥಮ ಭಾಗ ಕರ್ನಾಟಕ ಗ್ರಂಥಮಾಲೆಯಲ್ಲಿ 1896ರಲ್ಲಿ ಪ್ರಕಟವಾಯಿತು. 86 ಪುಟಗಳಿರುವ ಈ ಕೃತಿಯಲ್ಲಿ ತಮಿಳಿನ ಶ್ರೇಷ್ಠ ನೀತಿ ಸಾಹಿತ್ಯದ ಕೆಲವು ಕಾವ್ಯಭಾಗಗಳನ್ನು ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ತಮಿಳಿನಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ಮೂದುರೈ ಗ್ರಂಥದಿಂದ 30 ಪದ್ಯಗಳನ್ನೂ ವೆತ್ತಿವೇರ್ಕೈ ಮತ್ತು ನಲ್ಬಳಿ ಗ್ರಂಥಗಳಿಂದ 16 ಪದ್ಯಗಳನ್ನು ನೀತಿನೆರಿವಿಳಕ್ಕ ಎಂಬ ಗ್ರಂಥದಿಂದ 20 ಪದ್ಯಗಳನ್ನು ನೀತಿವೆಣ್ಬಾ ಎಂಬ ಗ್ರಂಥದಿಂದ 21 ಪದ್ಯಗಳನ್ನೂ ನಾಲಡಿಯಾರ್ ಎಂಬ ಕೃತಿಯಿಂದ 155 ಪದ್ಯಗಳನ್ನೂ ಇತರ ಗ್ರಂಥಗಳಿಂದ 42 ಪದ್ಯಗಳನ್ನೂ ಇದರಲ್ಲಿ ಸೇರಿಸಿದ್ದಾರೆ. ಅನುವಾದ ಹಳಗನ್ನಡದಲ್ಲಿ, ಕಂದಪದ್ಯಗಳಲ್ಲಿವೆ. ಶೈಲಿ ಬಿಗುವಾಗಿದೆಯಾದರೂ ಸುಂದರವಾಗಿ ಮೂಲದ ಭಾವಬನಿಗಳನ್ನು ಮೈದುಂಬಿಕೊಂಡು ಅಚ್ಚುಕಟ್ಟಿನಿಂದ ಕೂಡಿದುದೂ ಆಗಿದೆ. ನೀತಿಮಂಜರಿಯ ಎರಡು ಭಾಗಗಳನ್ನಲ್ಲದೆ ನರಸಿಂಹಾಚಾರ್ಯರು ನೀತಿವಾಕ್ಯಮಂಜರಿ ಎಂಬ ಗದ್ಯಕೃತಿಯನ್ನೂ ರಚಿಸಿದ್ದಾರೆ. ಈ ಚಿಕ್ಕ ಗ್ರಂಥದಲ್ಲಿನ ನೀತಿವಾಕ್ಯಗಳನ್ನು ತಮಿಳಿನ ಅವ್ವೈಯಾರ್, ತಿರುವಳ್ಳುವರ್- ಮೊದಲಾದ ತಮಿಳುಕವಿಗಳ ಕೃತಿಗಳಿಂದಲೂ ಕ್ಷೇಮೇಂದ್ರ, ಭರ್ತೃಹರಿ ಮುಂತಾದ ಸಂಸ್ಕøತ ಕವಿಗಳ ಕೃತಿಗಳಿಂದಲೂ ಆರಿಸಿ, ಸಂಗ್ರಹಿಸಿ ಅನುವಾದಿಸಲಾಗಿದೆ.

	1923ರಲ್ಲಿ ಪ್ರಕಟವಾದ ಶಾಸನಪದ್ಯಮಂಜರಿ ನರಸಿಂಹಾಚಾರ್ ಅವರ ದೊಡ್ಡ ಸಾಧನೆಯ ಪರಿಶ್ರಮದ ಫಲವಾಗಿ ಮೂಡಿಬಂದ ಮತ್ತೊಂದು ಅತ್ಯಪೂರ್ವ ಸಂಪಾದಿತ ಕೃತಿ. ಇದರಲ್ಲಿ 1,456 ಪದ್ಯಗಳಿವೆ. ಗಂಗ, ನೊಳಂಬ, ಚಾಳುಕ್ಯ, ರಾಷ್ಟ್ರಕೂಟ, ಚೋಳ, ಕಳಚುರ್ಯ, ಸೇವುಣ, ಕೊಂಗಾಳ್ವ, ಹೊಯ್ಸಳ, ಸಾಂತರ, ಪಾಂಡ್ಯ, ಸಿಂಧ, ಕದಂಬ, ನಿಡಗಲ್ಲು, ವಿಜಯನಗರ-ಎಂಬ ಹದಿನೈದು ರಾಜವಂಶಗಳಿಗೆ ಅನ್ವಯಿಸುವ ಇಲ್ಲಿನ ಶಾಸನಗಳು ಮೈಸೂರು ಮತ್ತು ಮುಂಬಯಿ ಕರ್ನಾಟಕಕ್ಕೆ ಸೇರಿವೆ.

	ನರಸಿಂಹಾಚಾರ್ಯರ ಕನ್ನಡ ಭಾಷಾಚರಿತೆ ಒಂದು ಒಳ್ಳೆಯ ಕೃತಿ. 5 ವಿಭಾಗಗಳಿಂದ ಕೂಡಿರುವ ಇದರಲ್ಲಿ ದ್ರಾವಿಡದ ಹುಟ್ಟು, ದ್ರಾವಿಡದ ನಾಗರಿಕತೆ, ದ್ರಾವಿಡ ಭಾಷೆ, ದ್ರಾವಿಡ ಭಾಷೆಯ ಮೇಲೆ ಸಂಸ್ಕøತ ಮತ್ತು ಆರ್ಯಭಾಷೆಗಳ ಪ್ರಭಾವ, ಅವುಗಳ ಮೇಲೆ ದ್ರಾವಿಡ ಭಾಷೆಯ ಪ್ರಭಾವ, ಕನ್ನಡ ಭಾಷೆಯ ಚರಿತೆ, ವ್ಯಾಕರಣ ವಿಷಯಗಳು-ಶಬ್ದಸಂಪತ್ತು, ಭಾಷೆಯಲ್ಲಿ ಕ್ರಮೇಣವಾಗಿ ಕಂಡುಬರುವ ಬದಲಾವಣೆಗಳು ಮುಂತಾದ ವಿಷಯಗಳನ್ನು ಕುರಿತು ಬರೆದಿದ್ದಾರೆ.

	ನರಸಿಂಹಾಚಾರ್ಯರಿಗೆ ಶಾಸ್ತ್ರೀಯ ಮತ್ತು ಸಂಶೋಧನ ಸಾಹಿತ್ಯದಂತೆಯೇ ಇತರ ಸಾಹಿತ್ಯ ಪ್ರಕಾರಗಳಲ್ಲಿಯೂ ಒಲವಿತ್ತು ಎಂಬುದಕ್ಕೆ ಅವರ ನಗೆಗಡಲು ಎಂಬ ಕೃತಿ ಸಾಕ್ಷಿಯಾಗಿದೆ. ಅವರ ಹಾಸ್ಯಪ್ರಿಯತೆಗೂ ಇದು ಪ್ರತ್ಯಕ್ಷದರ್ಶಿ. ಗಾಂಪರೊಡೆಯರು ಮತ್ತು ಅವರ ಶಿಷ್ಯರ ಪ್ರತಾಪಗಳಿಗೆ ಸಂಬಂಧಿಸಿದಂಥ ಇಲ್ಲಿನ ಘಟನೆಗಳು ಕಥಾರೂಪದಲ್ಲಿದ್ದು- 78 ಪುಟಗಳ ಈ ಕೃತಿಯ 10 ಪ್ರಕರಣಗಳಲ್ಲಿ ಹರಡಿವೆ. ಇ.ಜಿ.ಇ. ಬೆಶ್ಚಿ ಕೃತಿಯ ಭಾಷಾಂತರವಾದ ಈ ಕಿರುಹೊತ್ತಗೆಯಲ್ಲಿ ಹುಚ್ಚುಹಾಸ್ಯ, ಚುಚ್ಚುಹಾಸ್ಯ, ಪೆದ್ದುತನದ ಲೇವಡಿಗಳೇ ಹೆಚ್ಚಾಗಿದೆ.

	ಮೇಲಿನ ಕೃತಿಗಳಲ್ಲದೆ, ಪ್ರಾಕ್ತನ ಶಾಖೆಯ 16 ವಾರ್ಷಿಕ ವರದಿಗಳು, ಶ್ರವಣಬೆಳಗೊಳದ ಶಾಸನಗಳು, ಗಂಗರ ಚರಿತ್ರೆ, ಸಾಯಣ-ಮಾಧವ, ಬೇಲೂರು, ಸೋಮನಾಥಪುರ ಮತ್ತು ದೊಡ್ಡಗದ್ದವಳ್ಳಿಯ ಹೊಯ್ಸಳ ದೇವಸ್ಥಾನಗಳು-ಇವನ್ನು ಕುರಿತು ಮೂರು ಕೃತಿಗಳನ್ನು ಇವರು ರಚಿಸಿದ್ದಾರೆ. ಕಾವ್ಯಾವಲೋಕನ, ಭಾಷಾಭೂಷಣ ಮತ್ತು ಶಬ್ದಶಾಸನಗ್ರಂಥಗಳನ್ನು ಸಮರ್ಪಕವಾಗಿ ಸಂಪಾದಿಸಿದ್ದಾರೆ.

	ನರಸಿಂಹಾಚಾರ್ಯರು ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆ ಅಪಾರವಾದುದು, ಬಹುಮುಖವಾದುದು. ಸಂಶೋಧಕರಾಗಿ ಅನುವಾದಕರಾಗಿ, ಭಾಷಾವಿಜ್ಞಾನಿಯಾಗಿ ನಿರಂತರವಾಗಿ ಶ್ರಮಿಸಿ, ಕನ್ನಡ ನುಡಿಯನ್ನು ಇವರು ಶ್ರೀಮಂತಗೊಳಿಸಿದ್ದಾರೆ. ಓಲೆಗರಿಗಳಲ್ಲಿ ಹುಳು ತಿಂದೋ, ಭೂಗತವಾಗಿಯೋ ಹೋಗುತ್ತಿದ್ದ ಸಾಹಿತ್ಯ ಸಂಪತ್ತನ್ನು ಬಹಳ ಶ್ರಮಪಟ್ಟು ನಮಗೆ ದೊರಕಿಸಿಕೊಟ್ಟಿದ್ದಾರೆ. ಇವರಿಗೆ ದೊರೆತ ಪ್ರಕ್ತನ ವಿಮರ್ಶ ವಿಚಕ್ಷಣ, ಕರ್ನಾಟಕ ಪ್ರಾಚ್ಯ ವಿದ್ಯಾ ವೈಭವ, ರಾವ್ ಬಹದ್ದೂರ್, ಅಭಿನವ ಕನ್ನಡ ಸೀಮಾಪುರುಷ, ಮಹಾ ಮಹೋಪಾಧ್ಯಾಯ ಮುಂತಾದ ಬಿರುದುಗಳು ಔಚಿತ್ಯಪೂರ್ಣವೂ ಗುಣಭೂಷಣವೂ ಆಗಿದೆ.							
			(ಎಂ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ